Friday, January 21, 2011

Friday, January 21, 2011 1 Comments
ನಮ್ಮ ಹಿರಿಯರು ಮಕ್ಕಳನ್ನ ಆಡಿಸಲು ಬಹಳ ಹಾಡುಗಳು, ಪದಗಳು, ಜಾನಪದ ಗೀತೆಗಳನ್ನ ಕಟ್ಟಿದ್ದರು..
ನಮ್ಮ ಈಗಿನ ಜನಾಂಗ ಬದುಕು ಕಟ್ಟುವ ಆತುರತೆಯಲ್ಲಿ ಈ ಸುಮಧುರ ಹಾಗು ಮಗುವಿನ ಬೆಳವಣಿಗೆಗೆ ನೆರವಾಗುವ ಪದಗಳನ್ನ ಮರೆತಿದ್ದಾರೆ..

ನಾನು ನನ್ನ ಮಗಳಿಗಾಗಿ ಸ್ವಲ್ಪ ಮಟ್ಟಿಗೆ ಕಲೆತೆ.. ಅವಳು ಈ ಪದಗಳಿಗೆ ತಾನು ನಟಿಸಿದಾಗ ನಮಗಾದ ಸಂತೋಷ ಅಷ್ಟಿಷ್ಟಲ್ಲ..
ನಿಮಗೆ ಇದರ ರಾಗ ಬೇಕಾದರೆ ಕೇಳಿ.. ಖಂಡಿತ ತಲುಪಿಸುವ ವ್ಯವಸ್ಥೆ ಮಾಡುತ್ತೇನೆ..

ಈ ಹಾಡು ಹಾಡುತ್ತ.. ನಮ್ಮ ಕೈಯನ್ನು ಮುಚ್ಚಳ ತಿರುಗಿಸುವಾಗ ಮಾಡುವ ಹಾಗೆ ತಿರುಗಿಸ ಬೇಕು.. ೩-೫ ತಿಂಗಳ ಮಕ್ಕಳಿಗೆ ಇದನ್ನ ನೋಡೋದೇ ಖುಷಿ..


ತಾರಮ್ಮಯ್ಯ

ತಾರಮ್ಮಯ್ಯ ರಘುಕುಲ ರಾಮಚಂದಿರನ..
ತಾರಮ್ಮಯ್ಯ ಯದುಕುಲ ಬಾಲ ಕೃಷ್ಣನ್ನ..
ತಾರಕ್ಕಯ್ಯ.. ತಂದು ತೋರು ಅಕ್ಕಯ್ಯ..
------------------------------------------
ಈ ಪದವನ್ನು ಹಾಡುತ್ತ ಅಂಗೈಯನ್ನ ಮುಚ್ಚಿ ತೆಗೆದು ಮಾಡುತ್ತಿರಬೇಕು..೩-೫ ತಿಂಗಳ ಮಕ್ಕಳು ವಿಸ್ಮಯದಿಂದ ನೋಡುತ್ತವೆ.. ಮುಂದೆ ಅವೇ ಮಾಡುತ್ತವೆ..

ತಾ ತಾ ಗುಬ್ಬಿ

ತಾ ತಾ ಗುಬ್ಬಿ ತಾರೆ ಗುಬ್ಬಿ ತಾತಾ ಗುಬ್ಬಿ ತಾ
-------------------------------------------------
ಮಗುವನ್ನ ತೊಡೆಯ ಅಂಚಿನಲ್ಲಿ ಕೂಡಿಸಿಕೊಂಡು, ಎದೆಯ ಹತ್ತಿರ ಒಂದು ಕೈ ಹಿಡಿದು.. ಮಗುವಿನ ಕಾಲು ನೆಲಕ್ಕೆ ತಾಗುತ್ತಿರಬೇಕು.. ಮಗುವನ್ನು ಈ ಹಾಡು ಹೇಳುತ್ತಾ ಹಿಂದೆ ಮುಂದೆ ಮಾಡಬೇಕು.. ದೊಪ್ಪನೆ ಬಿತ್ತು ಎಂದಾಗ ನಮ್ಮ ತೊಡೆಯ ಮೇಲೆ ಮಲಗಿಸಿಕೊಳ್ಳಬೇಕು..
ಬೆನ್ನು ನಿಂತ ಮೇಲೇನೆ ಈ ಆಟ ಆಡಿಸಬೇಕು.. ೩-೪ ತಿಂಗಳಾದ ಮೇಲೆ ಎಂದು ಹೇಳಬಹುದು... ಮಗುವು ಹಿಗ್ಗಿನಲ್ಲಿ ತಾನೇ ಕಾಲಲ್ಲಿ ತಳ್ಳುತ್ತದೆ.. ಕಾಲಿಗೆ ಬಲ ಬರುತ್ತದೆ..


ದೂರಿ ದೂರಿ

ದೂರಿ ದೂರಿ ದುಂಡು ಪಾಪ
ನಾರಿಯರ ನಂದಗೋಪ
ಆರ ಮಕ್ಕಳ ತಂದನಮ್ಮ?
ಮನೆಗೆ ದೂರು ತಂದನಮ್ಮ
ದೂರಿ ದೂರಿ ದುಂಡು ತೋಳು
ದೂರಿ ದೂರಿ ಮಂಡೆ ಬೋಳು
ದೂರಿ ಆದಿ ಬಂತು ದೊಪ್ಪನೆ ಬಿತ್ತು...
--------------------------------------------
ಈ ಪದವು ಮಗು ಅಂಬೆಗಾಲು ಇಡುವಾಗ ಹೇಳಬಹುದು... ಒಮ್ಮೆ ನಾವು ತೋರಿಸಬೇಕಾಗುತ್ತದೆ.. ಅಂಬೆಗಾಲಿನಲ್ಲಿ ಕೂತು ಹಿಂದೂ ಮುಂದು ಹೋಗೋದು.. ಜಾಗ ಕದಲಬಾರದು..
ಆನೆ

೧)  ಆನೆ ಬಂತೊಂದು ಆನೆ..
      ಯಾವೂರಾನೆ?
     ಇಲ್ಲಿಗೇಕೆ ಬಂತು..
      ಹಾದಿ ತಪ್ಪಿ ಬಂತು..

೨)  ಆನೆ ಬಂತೊಂದು ಆನೆ
     ಏರಿ ಮೇಲೊಂದು ಆನೆ
     ನೀರು ಕುದಿತೊಂದು ಆನೆ
     ಹುಬ್ಬು ಹಾರಿಸ್ತು ಒಂದು ಆನೆ
     ಎಲ್ಲ ಆನೆ ಸಾಲಿಕ್ಕಿ ಬರುವಾಗ..
     ನೀನೆಲ್ಲಿದ್ದೆ.. ಪುಟ್ಟಾನೆ.. ಮರಿಯಾನೆ..
-------------------------------------------

ಇದು ಮಗು ಸುಮಾರು ೯-೧೦ ತಿಂಗಳಾದ ಮೇಲೆ ಆಡಿಸಬಹುದು.. ಒಂದು ಒಂದು ಎಂದು ಬಂದಾಗೆಲ್ಲ ಎಡಗೈಗೆ ಬಲಗೈಯ ಬೆರಳನ್ನು ಒಂದೊಂದಾಗಿ ತೋರಿಸುತ್ತ ಹೋಗುವುದು.. ಹೋಯ್ತು ಎಂದು ತಮಾಷೆಯಾಗಿ ತೋರಿಸಬೇಕು.. ದೊಡ್ಡ ಗಂಟು ಎಂದು ತಲೆ ಮೇಲೆ ಕೈ ಎತ್ತಿ ತೋರಿಸಬೇಕು.. ಮಗು ಹಾಗೆ ಮಾಡುವುದು ಕಲಿಯೋತ್ತೆ.. ನೋಡುವುದೇ ಒಂದು ಸಂಭ್ರಮ..

ಹಾಲಿಗೊಂದು ಕಾಸು

ಹಾಲಿಗೊಂದು ಕಾಸು..
ತುಪ್ಪಕ್ಕೊಂದು ಕಾಸು..
ಎಣ್ಣೆಗೊಂದು ಕಾಸು..
ಬೆಣ್ಣೆಗೊಂದು ಕಾಸು..
ಮೊಸರಿಗೊಂದು ಕಾಸು..
ಚಿಕ್ಕಪ್ಪ ಕೊಟ್ಟ ಕಾಸು ಪುಕ್ಕಟ್ಟೆ ಹೋಯ್ತು..
ಮಾವಯ್ಯ ಕೊಟ್ಟ ಕಾಸು ಮಾಯವಾಗಿ ಹೋಯ್ತು..
ಭಾವಯ್ಯ ಕೊಟ್ಟ ಕಾಸು ಬಾವಿಗೆ ಬಿತ್ತು..
ತಾತ್ಯ ಕೊಟ್ಟ ಕಾಸು ತೂತಾಗಿ ಹೋಯ್ತು..
ಅಪ್ಪಯ್ಯ ಕೊಟ್ಟ ಕಾಸು ದೊಡ್ಡ ಗಂಟು ಆಯ್ತು..
-------------------------------------------------------

ಮಗು ೮-೧೦ ತಿಂಗಳಾದಾಗ ಆಡಿಸುವ ಆಟ.. ಈ ಪದವನ್ನು ಹಾಡುತ್ತ ಹಿಂದಿಂದ ಮುಂದೆ ಕೈ ಬೀಸೋದನ್ನ ಹೇಳಿಕೊಡುವುದು..

ಕೈ ಬೀಸು

ಕೈ ಬೀಸಮ್ಮ ಕೈ ಬೀಸೆ..
ಹೊರಗೆ ಹೋಗೋಣ ಕೈ ಬೀಸೆ..
ತರಕಾರಿ ತರೋಣ ಕೈ ಬೀಸೆ..
ಮಿಠಾಯಿ ತರೋಣ ಕೈ ಬೀಸೆ..
ಕೈ ಬೀಸಮ್ಮ ಕೈ ಬೀಸೆ..

ಜೂಜು ಮಲ್ಲಿಗೆ

ಅಜೂಜು ಮಲ್ಲಿಗೆ..  ಜಾಜಿ ಸಂಪಿಗೆ..
ರಾಜ ತೇಜ ಮಗುವೆ ನನ್ನ ಗಾಜು ಗೊಂಬೆಯೇ..

ಓಲಾಡು

ಓಲಾಡಮ್ಮ  ಓಲಾಡೆ
ಪುಟ್ಟ ರಾಣಿಯೇ ಓಲಾಡೆ
ಸಿಂಗಾರ ಲಕ್ಷ್ಮಿಯೇ ಓಲಾಡು..